ಐಚ್ಛಿಕ ವಿಷಯಗಳು: ವಿದ್ಯಾರ್ಥಿ ತನ್ನ ಇಚ್ಛೆಗೆ ಅನುಸಾರವಾಗಿ ಆರಿಸಿಕೊಳ್ಳುವ ಅಧ್ಯಯನ ವಿಷಯಗಳು (ಆಪ್ಷನಲ್ ಸಬ್ಜಕ್ಟ್‌್ಸ). ಭಾರತದಲ್ಲಿ ಸಾಮಾನ್ಯವಾಗಿ ಪ್ರೌಢಶಾಲೆ ಮತ್ತು ಕಾಲೇಜುಗಳಲ್ಲಿ ಹೀಗೆ ಆರಿಸಿಕೊಳ್ಳುವ ಅವಕಾಶವಿರುತ್ತದೆ. ಕೆಲವು ಕಡೆಗಳಲ್ಲಿ ಪ್ರಾಥಮಿಕ ಶಾಲೆಯ ಮೇಲ್ತರಗತಿಗಳಲ್ಲೂ ಇಂಥ ಅವಕಾಶ ಉಂಟು. ವಿಷಯದ ಆಯ್ಕೆಗೆ ವಿದ್ಯಾರ್ಥಿಯ ಆಸಕ್ತಿ ಅಭಿರುಚಿಗಳೇ ನಿರ್ಣಾಯಕ ಕಾರಣಗಳು. ಜೊತೆಗೆ ತಾನು ಕೈಗೊಳ್ಳಬೇಕೆಂದಿರುವ ಕಸುಬಿಗೆ ಅನುಕೂಲವಾಗುವಂಥ ವಿಷಯಗಳನ್ನು ಆಯ್ದುಕೊಂಡು ಅವುಗಳಲ್ಲಿ ಪರಿಣತಿಯನ್ನು ಸಾಧಿಸಿದರೆ ಇನ್ನೂ ಉತ್ತಮ.

ಪ್ರೌಢಶಾಲೆಗಳಲ್ಲಿ ಹುಡುಗರ ಆಸಕ್ತಿಗಳಿಗೆ ಅನುಗುಣವಾಗಿ ಅವರವರ ಯೋಗ್ಯತೆಗೆ ತಕ್ಕಂತೆ ಅನೇಕ ಐಚ್ಛಿಕ ವಿಷಯಗಳಿವೆ. ಇವನ್ನು ಎರಡು ಮತ್ತು ಮೂರನೆಯ ವರ್ಷಗಳಲ್ಲಿ ವ್ಯಾಸಂಗ ಮಾಡಬೇಕು. ಇತ್ತೀಚಿನವರೆಗೂ ಕರ್ನಾಟಕ ರಾಜ್ಯದಲ್ಲಿ ಮೂರು ವಿಷಯಗಳನ್ನು ಒಳಗೊಂಡ ಒಂದು ಅಧ್ಯಯನ ಸಮೂಹವನ್ನು ಆರಿಸಿಕೊಳ್ಳಲು ಅವಕಾಶವಿತ್ತು. ಅಂಥ ಎಂಟು ಅಧ್ಯಯನ ವಿಷಯ ಸಮೂಹಗಳನ್ನೂ ಒಂದೊಂದು ವಿಷಯದಲ್ಲೂ ಆಯಬಹುದಾದ ವಿಷಯಗಳನ್ನೂ ಕೆಳಗೆ ಸೂಚಿಸಿದೆ : 1 ಮಾನವಿಕ ಗುಂಪಿನ ವಿಷಯಗಳು: i ಆಧುನಿಕ ಭಾಷೆ (ಕನ್ನಡ, ತೆಲುಗು, ಹಿಂದಿ, ಮರಾಠಿ, ಉರ್ದು, ಇಂಗ್ಲಿಷ್, ಫ್ರೆಂಚ್ ಮತ್ತು ಜರ್ಮನ್) ii ಪ್ರಾಚೀನ ಭಾಷೆ (ಸಂಸ್ಕೃತ, ಪಾಳಿ, ಪ್ರಾಕೃತ, ಪರ್ಷಿಯನ್ ಅಥವಾ ಅರಬ್ಬೀ ಭಾಷೆ) iii ಗಣಿತ iv ಚರಿತ್ರೆ v ಭೂಗೋಳವಿಜ್ಞಾನ vi ಅರ್ಥಶಾಸ್ತ್ರ vii ರಾಜನೀತಿವಿಜ್ಞಾನ viii ಪೌರನೀತಿ ix ಸಮಾಜವಿಜ್ಞಾನ 2. ವಿಜ್ಞಾನಶಾಸ್ತ್ರದ ಗುಂಪಿನ ವಿಷಯಗಳು : ಇವುಗಳಲ್ಲಿ ಯಾವುದಾದರೂ ಒಂದು ಗುಂಪನ್ನು ಆರಿಸಬಹುದು. i ಭೌತವಿಜ್ಞಾನ, ರಸಾಯನವಿಜ್ಞಾನ, ಮತ್ತು ಗಣಿತವಿಜ್ಞಾನ ii ಭೌತವಿಜ್ಞಾನ, ರಸಾಯನವಿಜ್ಞಾನ ಮತ್ತು ಜೀವವಿಜ್ಞಾನ 3 ತಾಂತ್ರಿಕ ಗುಂಪಿನ ವಿಷಯಗಳು; i ಗಣಿತವಿಜ್ಞಾನ ii ಭೌತವಿಜ್ಞಾನ, iii ರಸಾಯನವಿಜ್ಞಾನ iv ಎಂಜಿನಿಯರಿಂಗ್, ಡ್ರಾಯಿಂಗ್. 4 ಕೃಷಿವಿಜ್ಞಾನ; i ರಸಾಯನವಿಜ್ಞಾನ ii ಜೀವವಿಜ್ಞಾನ iii ಪಶುಸಂಗೋಪನ iv ತೋಟಗಾರಿಕೆ ಮತ್ತು ಕೃಷಿವಿಜ್ಞಾನ. 5 ವಾಣಿಜ್ಯದ ಗುಂಪಿನ ವಿಷಯಗಳು: ಇವುಗಳಲ್ಲಿ ಯಾವುದಾದರೂ ಮೂರು ವಿಷಯಗಳು: i ವಾಣಿಜ್ಯಶಾಸ್ತ್ರ ii ಜಮಾಖರ್ಚು ಅಥವಾ ಬುಕ್ಕೀಪಿಂಗ್ iii ಟೈಪ್ರೈಟಿಂಗ್ iv ಅರ್ಥಶಾಸ್ತ್ರ v ಸಹಕಾರಶಾಸ್ತ್ರ vi ಶೀಘ್ರಲಿಪಿ ಅಥವಾ ಷಾರ್ಟ್‌ಹ್ಯಾಂಡ್ vii ವಾಣಿಜ್ಯ ಭೂಗೋಳ, 6 ಗೃಹವಿಜ್ಞಾನ: i ಅ. ಗೃಹಕಾರ್ಯ ನಿರ್ವಹಣೆ ಆ. ನೆಯ್ಗೆ, ಬಟ್ಟೆಗಳು. ii ಆಹಾರ, ದೇಹಪೋಷಣೆ ಮತ್ತು ಅಡಿಗೆ iii ಶಿಶು ಸಂರಕ್ಷಣೆ ಮತ್ತು ಮಕ್ಕಳ ಬೆಳೆವಣಿಗೆ ಮತ್ತು ತಾಯ್ತನದ ಕಲೆ. 7. ಲಲಿತಕಲೆಗಳು: ಚಿತ್ರಕಲೆ ಮತ್ತು ವರ್ಣಕಲೆ ಸಂಗೀತ-ಕರ್ಣಾಟಕ ಸಂಗೀತ, ಹಿಂದೂಸ್ತಾನಿ ಸಂಗೀತ, ಪಾಶ್ಚಾತ್ಯ ಸಂಗೀತ ನೃತ್ಯ-ಭರತನಾಟ್ಯ; ಕಥಕ್ಕಳಿ; ಶಿಲ್ಪಶಾಸ್ತ್ರ. 8. ಮತ್ಸ್ಯೋದ್ಯಮಶಾಸ್ತ್ರದ ಗುಂಪಿನ ವಿಷಯಗಳು: i ರಸಾಯನವಿಜ್ಞಾನ ii ಜೀವವಿಜ್ಞಾನ iii ಮತ್ಸ್ಯೋದ್ಯಮ, ತಂತ್ರ.

ಮಾಧ್ಯಮಿಕ ಶಾಲಾ ಘಟ್ಟದಲ್ಲೂ ಐಚ್ಛಿಕ ವಿಷಯಗಳನ್ನು ಇಟ್ಟಿದ್ದಾರೆ. ಅವುಗಳಲ್ಲಿ ಬಡಗಿ ಕೆಲಸ, ವ್ಯವಸಾಯ, ದರ್ಜಿ ಕೆಲಸ, ಕಮ್ಮಾರನ ಕೆಲಸ ಇತ್ಯಾದಿಗಳು ಮುಖ್ಯವಾದವು. ಈ ಐಚ್ಛಿಕ ವಿಷಯಗಳ ಉದ್ದೇಶ ಬಾಲಕರು ಮಾಧ್ಯಮಿಕ ಶಾಲೆಯ ವಿದ್ಯಾಭ್ಯಾಸದ ಅನಂತರ ಸೂಕ್ತ ಉದ್ಯೋಗಗಳನ್ನು ಕೈಗೊಳ್ಳಲು ಅನುವು ಮಾಡುವುದೇ ಆಗಿದೆ.
ಐಚ್ಛಿಕ ವಿಷಯಗಳ ಬಗ್ಗೆ ಹೊಸ ಪ್ರಯೋಗಗಳು: 1956ರಲ್ಲಿ ಪ್ರಕಟವಾದ ಕೊಠಾರಿ ಶಿಕ್ಷಣ ಆಯೋಗದ ಸಲಹೆಯಂತೆ ಪ್ರೌಢಶಾಲೆಯ ಹಂತದಲ್ಲಿ ಐಚ್ಛಿಕ ವಿಷಯಗಳನ್ನು ಆರಂಭಿಸುವುದನ್ನು ಮುಂದೆ ಹಾಕುವ ಯತ್ನ ನಡೆಯುತ್ತಿದೆ. ಆಧುನಿಕ ಸಮಾಜಜೀವನ ಹೆಚ್ಚು ಹೆಚ್ಚು ಸಂಕೀರ್ಣವಾದಂತೆ ಹೆಚ್ಚಿನ ಸಾಮಾನ್ಯ ಶಿಕ್ಷಣ ಅಗತ್ಯವೆಂದೂ ವಿಶಿಷ್ಟ ಅಧ್ಯಯನಕ್ಷೇತ್ರಕ್ಕೆ ಕಾಲಿಡಲು ಅದು ತೀರ ಎಳೆಯ ವಯಸ್ಸೆಂದೂ ಈ ಸಲಹೆಯನ್ನು ಮಾಡಲಾಗಿದೆ. ಕೆಲವು ರಾಜ್ಯಗಳಲ್ಲಿ ಈ ಸಲಹೆಯನ್ನನುಸರಿಸಿ ಪ್ರೌಢಶಾಲೆಗಳಲ್ಲಿ ಐಚ್ಛಿಕ ವಿಷಯಗಳನ್ನೇ ತೆಗೆದುಹಾಕಿ ಜೂನಿಯರ್ ಕಾಲೇಜಿನಲ್ಲಿ ಅವಕ್ಕೆ ಅವಕಾಶ ಕಲ್ಪಿಸಲಾಗುತ್ತಿದೆ. ಈ ಹೊಸ ಪ್ರಯೋಗದ ಬಗ್ಗೆ ಶಿಕ್ಷಣವೇತ್ತರಲ್ಲಿ ಒಮ್ಮತ ಅಭಿಪ್ರಾಯವಿಲ್ಲ. ಸದ್ಯದ ಪ್ರಯೋಗದ ಫಲಾಫಲಗಳನ್ನು ನೋಡಿಕೊಂಡು ಮುಂದೆ ಆ ಬಗ್ಗೆ ಸಾರ್ವತ್ರಿಕವೂ ಸಾಧುವೂ ಆದ ತೀರ್ಮಾನಗಳನ್ನು ಕೈಗೊಳ್ಳಬೇಕಾಗುತ್ತದೆ.                (ಕೆ.ಆರ್.ವಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ